Friday, March 25, 2011

ಕ್ಷಮಿಸಿಬಿಡು ಕ್ಷಮಿಸಿಬಿಡು
ನಿನಗೇಳದೆ, ನಿನ್ನ ಪ್ರೀತಿಸುತಲಿರುವೆ
ಬಂದುಬಿಡು ಬಂದುಬಿಡು
ನನಗೇಳದೆ, ಕನಸಲಿ ಕಾಯುತಲಿರುವೆ
      ನಿನ್ನಿಂದ ಏನೊಂದು ನಿರೀಕ್ಷೆಯಿಲ್ಲ 
      ಅಪ್ಪಣೆ ಕೊಡುವೆಯ 
      ನಾ ನನ್ನ ಪಾಡಿಗೆ ಪ್ರೀತಿಸಲು 
      ನನ್ನಿಂದ ಯಾವೊಂದು ತೊಂದರೆ
      ನಿನಗಿಲ್ಲ ಒಪ್ಪಿಗೆ ನೀಡುವೆಯ
      ನಾ ನಿನ್ನ ನೆನಪಲೆ ಜೀವಿಸಲು |

ಬರೆಯಲು ಸ್ಪೂರ್ತಿಯ ತಂದೆ
ಬಾಳಲಿ ನವ ಒಲವನು ತಂದೆ
ಕಾಣಲು ಕನಸುಗಳ ತಂದೆ
ನೆನೆಯಲು ನೆನಪುಗಳ ತಂದೆ
      ಇಷ್ಟೊಂದೆಲ್ಲ ತಂದ ನಿನಗೆ
      ನನ್ನಿಂದೇನು ತರಲಾಗಲಿಲ್ಲ
      ಕ್ಷಮಿಸಿಬಿಡು ಕ್ಷಮಿಸಿಬಿಡು
ನೀನೆ ವಿಶೇಷ ಉಡುಗೊರೆ  ನನಗೀಜಗದಲಿ
ನಿನ್ನ ಮುಂದಿನ ಬಾಳಿಗೆ ವಿಶೇಷ
ಉಡುಗೊರೆಯ ಎಲ್ಲಿಂದ ತಂದು ನೀಡಲಿ ||

ತಂತಿ ಹರಿದ ವೀಣೆಯ ಮೀಟಿ
ಹೊಸದೊಂದು ಸ್ವರವ ನೀಡಿದೆ
ಬತ್ತಿ ಮುಗಿದ ದೀಪವ ಹಚ್ಚಿ 
ಎಂದು ಹಾರದ ಬೆಳಕ ಮೂಡಿಸಿದೆ 
        ಇಷ್ಟೆಲ್ಲಾ ನೀಡಿದ ನಿನಗೆ 
        ನನ್ನಿಂದೇನು ನೀಡಲಾಗಲಿಲ್ಲ 
        ಕ್ಷಮಿಸಿಬಿಡು ಕ್ಷಮಿಸಿಬಿಡು
ನೀನೆ ನನ್ನ ಭಾವವ ಮೀರಿದ ಆಶಯ
ನಿನ್ನ ನಾಳೆಯ ಬದುಕಿಗೆ
ಹೇಗೆ ಬಂದು ಹೇಳಲಿ ಶುಭಾಶಯ ||
ಎಲ್ಲಿ ನಡೆಯಲಿ, ಎಲ್ಲಿ ಕೂರಲಿ
ಬರಿದೇ ಬರಿದೇ ಅನಿಸಿದೆ
ಎಲ್ಲಿ ಅಲೆಯಲಿ, ಹೇಗೆ ಬಾಳಲಿ
ನಿನ್ನ ದನಿಯು ಪ್ರತಿದ್ವನಿಸಿದೆ

ಸುಪ್ತ ಮನಸಲಿ
ಗುಪ್ತವಾಗಿದ್ದ ಒಲವು
ಹೊರಗೆ ಬರಲು ಒದ್ದಾಡಿ
ದೂರವಾಗುವ ವೇದನೆಯಲಿ
ಕ್ಯಗೆ ಸಿಗದ ಗೆಲುವು
ಸೋಲೊಂದಿಗೆ ಗುದ್ದಾಡಿ
ಹೇಳಹೊರಟ ಮಾತುಗಳೆಷ್ಟೋ
ಹೇಳಿದ ಮಾತೊಂದೆ
ಬೀಳಹೊರಟ ಹೃದಯದಲ್ಲಿ
ಬದುಕಿ ಉಳಿದ ನೆನಪೊಂದೆ

ನೆನಪು, ಕನಸು, ನೋವು
ನನ್ನ ಪಾಲಿಗೆ ಇವು ಮೂರು
ಎದೆಯಂತರಾಳದಲ್ಲಿ ಉಳಿದ
ನಿರೀಕ್ಷೆಗಳು ಅವು ನೂರು
ಕತ್ತಲಾದ ಮನದ ಗುಡಿಯ
ಬೆಳಗುವ ಪ್ರಣತಿ ಮುಂದಾರು..?
ನಿನ್ನ ಆಣತಿಗೆ ತಲೆಬಾಗಿ
ಹೊರಟಿರುವೆ ಕಾನನದಿ ಹುಡುಕಿ ಹೊಳಪು
ಅಲ್ಲಿಯವರೆಗೂ ಮರೆಯದಿರಲಿ
ವೇದನೆ ಅನಿಸಿದರು ಸರಿಯೇ ನಿನ್ನ ನೆನಪು
ಕೊನೆಯ ಪುಟಗಳೆಲ್ಲ 
ಮೊದಲ ಪುಟಕೆ ಜಿಗಿದವು
ಮೊದಲ ಪುಟಗಳೆಲ್ಲ
ಎಲ್ಲೋ ಮಾಯವಾದವು
      ನಲಿಯುತ್ತಿದ್ದ ಪದಗಳೆಲ್ಲ 
      ಏಕೋ ಮೂಕವಾದವು 
      ಮಾತಾಡುತ್ತಿದ್ದ ಸಾಲುಗಳೆಲ್ಲ
      ಏಕೋ ಮಾತು ಮರೆತವು |
 
ಮೊನ್ನೆ ತಾನೆ ಬಂದು ನನ್ನ ಬಾಳಲಿ
ಆಗಲೆ ನೀನು ಕಾಣದಾದೆ
ನೆನ್ನೆ ತಾನೆ ತೇಲಿ ನನ್ನ ಕಣ್ಣಲಿ
ಮರೆಯಲಾಗದ ನೆನಪಾಗಿಹೋದೆ
       ಮುಗಿಬೀಳುತ್ತಿರುವ ಕನಸ್ಸಿಗೆ 
       ಏನೆಂದು ಉತ್ತರ ನೀಡಲಿ
       ನಿನ್ನನೆ ಕಾಯುತ್ತಿರುವ ಮನಸಿಗೆ
       ಹೇಗೆ ಸಮಾದಾನ ಮಾಡಲಿ ||
 
ಸೊನ್ನೆ ಎಂದುಕೊಂಡಿದ್ದ ಬಾಳಲಿ
ಬಂದು ಬಗೆಯರಿಯದ ಲೆಕ್ಕವಾದೆ
ನಾನೇ ಬರೆದ ವೇದನೆಯ ಹಾಡಲಿ
ಸಿಲುಕಿಸಿ, ಕಾಣದೆ ಹೊರಟುಹೋದೆ
      ನಿನ್ನೆಸರನೆ ಬಡಿಯುತ್ತಿರುವ ಹೃದಯಕೆ
      ನಿಲಿಸುವೆಯಾ ಎಂದು ಹೇಗೆ ನಾ ಕೇಳಲಿ
      ನಿನ್ನ ನೆನಪಲೆ ಉಳಿದಿರುವ ಜೀವಕೆ
      ಮರೆತುಬಿದೆಂದು ಹೇಗೆ ನಾ ಹೇಳಲಿ ||